ಕಾಮ್ಯುಟೇಟರ್

ತಾಮ್ರದ ಸಿಲಿಂಡರೊಂದನ್ನು ಬೇರೆ ಬೇರೆ ಭಾಗಗಳನ್ನಾಗಿ ವಿಭಾಗಿಸಿ ಆ ವಿಭಾಗಗಳಲ್ಲಿ ಮೈಕದಿಂದ, ಪರಸ್ಪರ ನೇರ ವಿದ್ಯುತ್ ಸಂಪರ್ಕವಿಲ್ಲದಂತೆ ಮಾಡಿರುವ ಒಂದು ಸಾಧನ. ಇದನ್ನು ನೇರ ವಿದ್ಯುತ್ಪ್ರವಾಹ (ಡಿಸಿ) ಯಂತ್ರಗಳಲ್ಲಿ ಮತ್ತು ಪರ್ಯಾಯ ವಿದ್ಯುತ್ಪ್ರವಾಹ (ಎಸಿ) ಮೋಟಾರುಗಳಲ್ಲಿ ಸಾಮಾನ್ಯವಾಗಿ ಬಳಸುವರು. ಇದರ ಉಪಯೋಗ ಅಥವಾ ಕಾರ್ಯವನ್ನು ಸ್ಥೂಲವಾಗಿ ತಿಳಿಯಲು, ಎರಡು ವಿಭಾಗ ಮಾತ್ರವಿರುವ ಕಾಮ್ಯುಟೇಟರನ್ನು ಪರಿಶೀಲಿಸಬೇಕು.

 

ಚಿತ್ರ-3

 

ಒಂದು ವಿದ್ಯುದ್ವಾಹಕ ಸುರುಳಿಯನ್ನು ಕಾಂತಕ್ಷೇತ್ರದ ನಡುವೆ ಸುತ್ತುವಂತೆ ಮಾಡಿದರೆ ಸುರುಳಿಯ ತುದಿಗಳೆರಡರಲ್ಲಿ ವಿದ್ಯುಚ್ಚಾಲಕ ಬಲ (emಜಿ) ಉಂಟಾಗುವುದು. ಇಲ್ಲಿ ಉತ್ಪತ್ತಿಯಾಗುವ ಪರ್ಯಾಯ ವಿದ್ಯುತ್ತನ್ನು ನೇರ ವಿದ್ಯುತ್ತಾಗಿ ಪರಿವರ್ತಿಸಲು ಕಾಮ್ಯುಟೇಟರ್ ಸಹಾಯ ಆವಶ್ಯಕ. ಚಿತ್ರ 1 ರಲ್ಲಿ PP' ಗಳು ಸುರುಳಿಯ ತುದಿಗಳನ್ನು ಪ್ರತಿನಿಧಿಸಲಿ. ಕಾಮ್ಯುಟೇಟರಿನ ಎರಡು ಭಾಗಗಳು ಸ್ಥಿರವಾಗಿರುವ ಎರಡು ಇಂಗಾಲದ ಬ್ರಷ್ ಃಃ ಗಳನ್ನು ತಾಕುವಂತೆ ಏರ್ಪಡಿಸಲಾಗಿದೆ. ಈ ಸ್ಥಾನದಲ್ಲಿ ಸುರುಳಿ ಕಾಂತ ಬಲರೇಖೆಗಳಿಗೆ ಲಂಬವಾಗಿ ಚಲಿಸುವುದರಿಂದ emಜಿ ಗರಿಷ್ಠವಾಗಿರುವುದು. ಮತ್ತು ಮೇಲಿನ ಬ್ರಷ್ +, ಕೆಳಗಿನ ಬ್ರಷ್ - ಆಗಿವೆ. ಇದನ್ನು ಫ್ಲೆಮಿಂಗನ ಎಡಗೈ ನಿಯಮದಿಂದ ತಿಳಿಯಬಹುದು.

ಚಿತ್ರ 2ರಲ್ಲಿ ಸುರುಳಿಯ ಚಲನೆ ಕಾಂತ ಬಲರೇಖೆಗಳ ನೇರದಲ್ಲಿರುವುದರಿಂದ emಜಿ ಶೂನ್ಯ. ಅಂದರೆ ಅದು ಗರಿಷ್ಠ ಬೆಲೆಯಿಂದ ಶೂನ್ಯಕ್ಕೆ ಇಳಿಯಿತು.

ಚಿತ್ರ 3ರಲ್ಲಿ ಸುರುಳಿ ಅರ್ಧ ಸುತ್ತು ಹಾಕಿರುವುದನ್ನು ನೋಡಬಹುದು. ಈ ಚಿತ್ರ 3 ಸ್ಥಾನದಲ್ಲಿಯೂ ಉತ್ಪತ್ತಿಯಾದ emಜಿ ಗರಿಷ್ಠವಾಗಿರುವುದು. ಈಗಲೂ ಮೇಲಿನ ಬ್ರಷ್ + ಕೆಳಗಿನದು - ಅಂದರೆ ಮೇಲಣ ಬ್ರಷ್‍ನಿಂದ ಯಾವಾಗಲೂ + ಕೆಳಗಿನದರಿಂದ -emಜಿ  ಬರುವುದು. ಕಾಮ್ಯುಟೇಟರ್ ಬಳಕೆಯಿಂದ ಪರ್ಯಾಯ ಋಣ ಭಾಗವನ್ನು ಧನರೂಪಕ್ಕೆ ಪರಿವರ್ತಿಸಿದಂತಾಯಿತು.

ಯಾವುದಾದರೂ ವಿದ್ಯುನ್ಮಂಡಲದ ಒಂದು ಭಾಗದಲ್ಲಿ ಮಾತ್ರ ವಿದ್ಯುತ್ಪ್ರವಾಹದ ದಿಕ್ಕನ್ನು ಬದಲಾಯಿಸಲು ಸಹ ಕಾಮ್ಯುಟೇಟರನ್ನು ಪ್ರಯೋಗಶಾಲೆಯಲ್ಲಿ ಬಳಸುವುದುಂಟು. ತಾಮ್ರದ ಅಥವಾ ಹಿತ್ತಾಳೆಯ ವೃತ್ತಾಕಾರದ ದಪ್ಪ ಪಟ್ಟಿಯನ್ನು ಎರಡು ಭಾಗಮಾಡಿ ಎರಡಕ್ಕೂ ಸ್ವಲ್ಪ ಸ್ಥಳವಿರುವಂತೆ ಮಾಡಿ ಒಂದು ಮರದ ಪಟ್ಟಿಯ ಮೇಲೆ ಬಂಧಿಸಿದೆ. ವಿದ್ಯುನ್ಮಂಡಲಕ್ಕೆ ಸಂಪರ್ಕವೇರ್ಪಡಿಸಲು ಎರಡು ಪಟ್ಟಿಗಳಿಗೂ ಒಂದೊಂದು ಬಂಧಕ ಸ್ಕ್ರೂ ಸೇರಿಸಿದೆ. ಎಸಿ ಮೋಟಾರಿನಲ್ಲಿ ಬ್ರಷ್ ಬದಲು ತಾಮ್ರದ ತೆಳುವಾದ ತಗಡುಗಳನ್ನು ಉಪಯೋಗಿಸಿ ವಿದ್ಯುತ್ ಪ್ರವಾಹದ ದಿಕ್ಕನ್ನು ಬದಲಾವಣೆ ಮಾಡುವ ಏರ್ಪಾಡಿದೆ.

ಪ್ರಯೋಗಶಾಲೆಯಲ್ಲಿ ಮತ್ತೊಂದು ರೀತಿಯ ಕಾಮ್ಯುಟೇಟರ್ ಕೂಡ ಬಳಕೆಯಲ್ಲಿದೆ. ಇದನ್ನು ಪೋಹ್ಲ್ ಕಾಮ್ಯುಟೇಟರ್ ಎಂದು ಕರೆಯುವರು. ಇದರ ಕಾರ್ಯವೂ ವಿದ್ಯುನ್ಮಂಡಲದಲ್ಲಿ ವಿದ್ಯುತ್ಪ್ರವಾಹದ ದಿಕ್ಕನ್ನು ಬದಲಾಯಿಸುವುದೇ ಆಗಿದೆ. ಒಟ್ಟಿನಲ್ಲಿ ಇದೊಂದು ದಿಕ್ಪರಿವರ್ತಕ, ವ್ಯತ್ಯಯಕ, ವಿನಿಮಯಕಾರಿ. 

                                                                     (ಪಿ.ವಿ.)

                              (ಪರಿಷ್ಕರಣೆ: ಹೆಚ್.ಆರ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ